ಮಹಾಲನೊಬಿಸ್, ಪ್ರಶಾಂತಚಂದ್ರ		
1893-1972. ಭಾರತವನ್ನು ಪ್ರಪಂಚದ ಸಂಖ್ಯಾಕಲನವಿಜ್ಞಾನ (ಸ್ಟ್ಯಾಟಿಸ್ಟಿಕ್ಸ್) ಪಟದಲ್ಲಿ ಸ್ಥಾಪಿಸಿದ, ಭಾರತದ ಪಂಚವಾರ್ಷಿಕ ಯೋಜನೆಗಳಿಗೆ ಸಂಖ್ಯಾಕಲನವಿಜ್ಞಾನದ ಸುಭದ್ರ ಅಸ್ತಿಭಾರ ಒದಗಿಸಿದ ಹಾಗೂ ತಮ್ಮ ಜೀವಿತಾವಧಿಯಲ್ಲಿ ಸಂಶೋಧನೆ. ವ್ಯವಸ್ಥಾಪನೆ ಮತ್ತು ಯೋಜನೆ ಎಂಬ ಮೂರು ಕ್ಷೇತ್ರಗಳಲ್ಲಿ ಎಣೆಯಿಲ್ಲದ ಧುರೀಣತ್ವ ಒದಗಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ಸಂಖ್ಯಾಕಲನವಿಜ್ಞಾನಿ. ಹಿಂದೂ ಸಮಾಜದಲ್ಲಿ P್ಫ್ರಂತಿಕಾರಿ ಸುಧಾರಣೆಗಳನ್ನು ಅವಾಹಿಸಿದ ಸಾಧಾರಣ ಬ್ರಾಹ್ಮೊ ಸಮಾಜ, ಶಿಕ್ಷಣ ಹಾಗೂ ಕಲಾಜಗತ್ತಿನಲ್ಲಿ ನವಮನ್ವಂತರವನ್ನೇ ಪ್ರವರ್ತಿಸಿದ ಕವಿ ರವೀಂದ್ರರ ವಿಶ್ವಭಾರತಿ ಮತ್ತು ಭಾರತದಲ್ಲಿ ಸಂಖ್ಯಾಕಲನವಿಜ್ಞಾನ ನೆಲೆಯೂರಲು ಕಾರಣವಾದ (ಮತ್ತು ಇವರದೇ ಸೃಷ್ಟಿಯಾದ) ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್ ಈ ಮೂರು ಸಂಸ್ಥೆಗಳ ಜೊತೆ ಇವರು ಅತಿ ನಿಕಟ ಸಂಪರ್ಕ ಇಟ್ಟುಕೊಂಡಿದ್ದು ಇವುಗಳ ವ್ಯಾಪಕ ಅಭಿವರ್ಧನೆಗೆ ಕಾರಣರಾದರು.

	ಪ್ರಶಾಂತಚಂದ್ರರ ಪೂರ್ವಜರು (ಈಗಿನ) ಬಾಂಗ್ಲಾದೇಶ ನಿವಾಸಿಗರು. ಇವರ ಅಜ್ಜ ಗುರುಚರಣ್ ಹೊಸ ದಾರಿ ಅರಸುತ್ತ ಕಲ್ಕತ್ತಕ್ಕೆ ಬಂದರು (1854). ಸಣ್ಣ ಪ್ರಮಾಣದಲ್ಲಿ ಔಷಧಿ ಅಂಗಡಿ ತೆರೆದು ಜೀವನಯಾಪನೆಗೆ ಹಾದಿ ಮಾಡಿಕೊಂಡರು. ಅಂದು ಬಂಗಾಲದಲ್ಲಿ ಪಾಶ್ಚಾತ್ಯ ಶಿಕ್ಷಣ ಕ್ರಮವೂ ಆಂಗ್ಲ ಸಂಸ್ಕøತಿಯೂ ವ್ಯಾಪಕವಾಗಿ ಹಬ್ಬುತ್ತಿದ್ದುವು. ಯುಗ ಯುಗಗಳಿಂದ ಮಡುಗಟ್ಟಿದ್ದ ಅಂಧಸಂಪ್ರದಾಯದ ಮಡಿಲಲ್ಲಿ ತೊಳಲುತ್ತಿದ್ದ ಯುವ ಜನಾಂಗದ ಮುಂದೆ ನವಕ್ಷೇತ್ರಗಳು ಅನಾವರಣಗೊಳ್ಳುತ್ತಿದ್ದುವು. ಈ ಉಲ್ಲಾಸದಾಯಕ ಪರಿಸರದಲ್ಲಿ ಅರಳುತ್ತಿದ್ದ ಗುರುಚರಣ್ ಆಧುನಿಕ ಬಂಗಾಲೀ ಸಮಾಜದ ನಿರ್ಮಾಪಕರೆಂದು ಖ್ಯಾತರಾದ ಮಹರ್ಷಿ ದೇವೇಂದ್ರನಾಥ ಠಾಕೂರ, ಕೇಶವಚಂದ್ರಸೇನ ಮತ್ತು ಈಶ್ವರಚಂದ್ರ ವಿದ್ಯಾಸಾಗರ ಇವರುಗಳ ಪ್ರಭಾವಕ್ಕೆ ಒಳಗಾಗಿ ಸಾಧಾರಣ ಬ್ರಾಹ್ಮೊ ಸಮಾಜದ ಒಬ್ಬ ನಿಷ್ಠಾವಂತ ಕಾರ್ಯಕರ್ತರಾದರು. ತಮ್ಮ ಆದರ್ಶವನ್ನು ಪ್ರತ್ಯಕ್ಷವಾಗಿಸಲೋ ಎಂಬಂತೆ ಗುರುಚರಣ್ ಒಬ್ಬ ಬಾಲ ವಿಧವೆಯನ್ನು ಮದುವೆಯಾಗಿ ಬಿಡಾರ ಹೂಡಿದರು.

	ಗುರುಚರಣರ ಮೊಮ್ಮಗನೇ ಪ್ರಶಾಂತಚಂದ್ರ. 1893 ಜೂನ್ 29ರಂದು ಕಲ್ಕತ್ತದಲ್ಲಿ ಜನನ. ಚಿಕ್ಕಂದಿನಿಂದಲೇ ಅವರು ಎರಡು ಅಪೂರ್ವ ಗುಣಗಳ ಮಿಲನವಾಗಿದ್ದರು. ಸಾಹಿತ್ಯ ಮತ್ತು ಸಂಸ್ಕøತಿಗಳಲ್ಲಿ ಅಪಾರಾಸಕ್ತಿ ಅತ್ಯಂತ ತಾರ್ಕಿಕ ನಿಶಿತಮತಿ. ರವೀಂದ್ರನಾಥ ಠಾಕೂರರಿಗೆ ಈ ಹುಡುಗನ ಬಗ್ಗೆ ವಿಶೇಷ ಒಲವು. ಆಗ ಇನ್ನೂ ಆರಂಭದ ದಿನಗಳಲ್ಲಿದ್ದ ಶಾಂತಿನಿಕೇತನದ ಜೊತೆ ಪ್ರಶಾಂತರ ಸಂಬಂಧ ಗಾಢವಾಗಿತ್ತು. ಇವರು ಅದರ ವಿದ್ಯಾರ್ಥಿ ಆಗಿರಲಿಲ್ಲ. ನೌಕರರೂ ಆಗಿರಲಿಲ್ಲ. ಆದರೆ ಅದನ್ನು ಕಟ್ಟಿ ಬೆಳೆಸುವುದರಲ್ಲಿ ಇವರು ರವೀಂದ್ರರ ಹಿರಿತನದಲ್ಲಿ ಅಸಾಧಾರಣ ಪಾತ್ರ ವಹಿಸಿದರು.
	
	ಕಲ್ಕತ್ತದಲ್ಲಿಯ ಬ್ರಾಹ್ಮೊ ಹುಡುಗರ ಶಾಲೆಯಲ್ಲಿ ಆರಂಭದ ಶಿಕ್ಷಣ. ಮುಂದೆ ಪ್ರೆಸಿಡೆನ್ಸಿ ಕಾಲೇಜ್ ಸೇರಿ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲೂ (1910) ತರುವಾಯ ಭೌತವಿಜ್ಞಾನ ಬಿ. ಎಸ್. ಸಿ. ಅನರ್ಸ್‍ಪರೀಕ್ಷೆಯಲ್ಲೂ (1912) ಉತ್ತಮ ಶ್ರೇಣಿಗಳಲ್ಲಿ ಉತ್ತೀರ್ಣರಾದರು. 1913ರಲ್ಲಿ ಲಂಡನ್ನಿಗೆ ತೆರಳಿದರು. ಲಂಡನ್ ಬಿ. ಎಸ್. ಸಿ. ಮಾಡುವುದು ಉದ್ದೇಶ. ಆದರೆ ಅದೇ ತರುಣದಲ್ಲಿ ಇವರು ಕೇಂಬ್ರಿಜ್ಜಿಗೆ ನೀಡಿದ ಒಂದು ಪ್ರಾಸಂಗಿಕ ಭೇಟಿ ಇವರ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು; ಗಣಿತವನ್ನು ಆಯ್ದು ಟ್ರೈಪಾಸ್ ಪರೀಕ್ಷೆಗೆ ಕುಳಿತು ಅದರ ಪ್ರಥಮ ಭಾಗದಲ್ಲಿ ತೇರ್ಗಡೆಯಾದರು (1914) ದ್ವಿತೀಯ ಭಾಗಕ್ಕೆ ಭೌತವಿಜ್ಞಾನ ಆಯ್ದು. ಸಾಮಾನ್ಯವಾಗಿ ಎರಡು ವರ್ಷಗಳಲ್ಲಿ ಮುಗಿಸಬೇಕಾಗಿದ್ದ ಅಧ್ಯಯನವನ್ನು ಕೇವಲ ಒಂದು ವರ್ಷದಲ್ಲೇ ಪೂರೈಸಿದರು (1915).

	ಆ ಕ್ಷಣದಲ್ಲಿ ಭೌತವಿಜ್ಞಾನ ಇವರನ್ನು ತನ್ನ ಕಕ್ಷೆಗೆ ತೆಗೆದುಕೊಂಡಿತ್ತೋ ಎನ್ನುವ ಪರಿಸ್ಥಿತಿ. ಕ್ಯಾವೆಂಡಿಶ್ ಪ್ರಯೋಗ ಮಂದಿರದಲ್ಲಿ ಸಿ. ಟಿ ಆರ್. ವಿಲ್ಸನ್ ಅವರ ಸಂಶೋಧನ ಸಹಾಯಕರಾಗಿ ಕಾರ್ಯೋದ್ಯುಕ್ತರಾರು. ಅದೇ ಜುಲೈ ತಿಂಗಳಿನಲ್ಲಿ ಕಿರುರಜೆ ಮೇಲೆ ಕಲ್ಕತ್ತಕ್ಕೆ ಮರಳಿದಾಗ ಒಮ್ಮೆ ತಮ್ಮ ಹಳೆಯ ಕಾಲೇಜಿಗೆ ಭೇಟಿ ನೀಡಿದರು. ಆಗ ಒಂದನೆಯ ಮಹಾಯುದ್ಧದ ಕಾಲವಾಗಿದ್ದುದರಿಂದ ಕಾಲೇಜು ವಿದೇಶೀ ಆಧ್ಯಾಪಕರ ಕೊರತೆಯಿಂದಲೂ ಸ್ವದೇಶೀ ಅಧ್ಯಾಪಕರ ಅಲಭ್ಯತೆಯಿಂದಲೂ ತಾಡಿತವಾಗಿತ್ತು. ಮಹಾಲನೊಬಿಸರ ಅರ್ಹತೆ ಮತ್ತೆ ಪ್ರತಿಭೆ ಗಮನಿಸಿದ ಪ್ರಾಂಶುಪಾಲರು ಇವರನ್ನು ಒಂದಷ್ಟು ದಿನ  ತಮ್ಮ ಕಾಲೇಜಿನಲ್ಲಿ ಭೌತವಿಜ್ಞಾನ ಪಾಠಮಾಡಲು ಕೋರಿದರು. ಕೇವಲ ಹಂಗಾಮಿಯಾಗಿ ಹಿಡಿದ ಈ ವೃತ್ತಿ ಮಹಾಲನೊಬಿಸರನ್ನು ಭಾರತಕ್ಕೆ ಶಾಶ್ವತವಾಗಿ ಬಂಧಿಸಿಬಿಟ್ಟಿತು. ಇಲ್ಲಿ ಆಗ ಲಭ್ಯವಿದ್ದ ಅವಕಾಶಗಳು ಇವರೆದುರು ಹಿರಿಯ ಸವಾಲುಗಳಾಗಿ ನಿಂತಿದ್ದವು.

	ಕೇಂಬ್ರಿಜ್ಜನ್ನು ಬಿಡುವ ಮೊದಲು ಮಹಾಲನೊಬಿಸರ ಗುರು ಡಬ್ಲು. ಎಚ್. ಮೆಕಾಲೇ ಎಂಬುವರು ಇವರ ಗಮನವನ್ನು ಕಾರ್ಲ್ ಪಿಯರ್ಸನ್ ಸಂಪಾದಿಸುತ್ತಿದ್ದ ಬಯೋಮೆಟ್ರಿಕ್ ಸಂಶೋಧನ ನಿಯತಕಾಲಕ ಮತ್ತು ಬಯೊಮೆಟ್ರಿಕ್ ಟೇಬಲ್ಸ್ ಎಂಬ ಸಂಖ್ಯಾಕಲನವಿಜ್ಞಾನ ಗ್ರಂಥಗಳತ್ತ ಸೆಳೆದಿದ್ದರು. ಕಾರ್ಲ್‍ಪಿಯರ್ಸನ್ ಅಂದು ಪ್ರಪಂಚದ ಮುಂಚೂಣಿ ಸಂಖ್ಯಾಕಲನವಿಜ್ಞಾನಿ. ಈ ಗ್ರಂಥಗಳನ್ನು ಅಭ್ಯಸಿಸಿದ ಮಹಾಲನೊಬಿಸ್ ಸಂಖ್ಯಾಕಲನವಿಜ್ಞಾನದ ಬಹುವಿಧತ್ವ ಹಾಗೂ ಬಹು ಸಾಧ್ಯತೆಗಳಿಂದ ಬಹುವಾಗಿ ಆಕರ್ಷಿತರಾದರು. ಮೊದಲ ಕಲಿತದ್ದು ಮುಂದೆ ಓದಿದ್ದು ಭೌತವಿಜ್ಞಾನ, ಈಗ ಆಸಕ್ತಿ ತಳೆದದ್ದು ಸಂಖ್ಯಾಕಲ£ವಿಜ್ಞಾನ-ಹೀಗೆ ಅರಳಿತು ಈ ಪ್ರತಿಭೆ.

	ಪ್ರಪಂಚದಲ್ಲೇ ಈ ವಿಜ್ಞಾನ ವಿಭಾಗ ಆಗ ಹೊಸತು. ಭಾರತದಲ್ಲಂತೂ ಇದರ ಹೆಸರೇ ಇರಲಿಲ್ಲ; ಇಂಥ ದಿನಗಳಲ್ಲಿ ಮಹಾಲನೊಬಿಸರ ಈ ಅಜ್ಞಾತದೆಡೆಗಿನ ಜಿಗಿತವನ್ನು ಬೆಂಬಲಿಸಿದವರು ಮೂವರು ಸೀಮಾ ಪುರುಷರು; ವೈದ್ಯವಿಜ್ಞಾನಿ ನೀಲರತನ್ ಸರ್ಕಾರ್, ಬ್ರಜೇಂದ್ರನಾಥ್ ಸೀಲ್ ಮತ್ತು ರವೀಂದ್ರನಾಥ ಠಾಕೂರ್, ಮಹಾಲನೊಬಿಸ್ ಕೇಂಬ್ರಿಜ್ಜನ್ನು ಮರೆತರು. ಸಂಖ್ಯಾಕಲನವಿಜ್ಞಾನವನ್ನು ಭದ್ರವಾಗಿ ಆಶ್ರಯಿಸಿದರು.

	ಅದೇ ಸುಮಾರಿಗೆ, 1917, ಬ್ರಜೇಂದ್ರನಾಥ ಸೀಲ್-ಇವರು ಸ್ವತಃ ಗಣಿತದಲ್ಲಿ ಮೂಲಭೂತ ಸಂಶೋಧನೆ ಮಾಡಿದ್ದು ಆಗ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು ಮಹಾಲನೊಬಿಸರನ್ನು ಪ್ರಚಲಿತ ಪರೀಕ್ಷಾ ವ್ಯವಸ್ಥೆಯ ಅಧ್ಯಯನ ಮಾಡಲು ನಿಯೋಜಿಸಿದರು. ಸಂಬಂಧಿಸಿದ ದಾಖಲೆಗಳನ್ನು ಸಂಖ್ಯಾಕಲನವಿಜ್ಞಾನ ವಿಧಾನಗಳ ಮೂಲಕ ಆಭ್ಯಸಿಸಿದ ಇವರೆದುರು ಹೊಸ ಹಾದಿಗಳು ತೆರೆದುಕೊಂಡವು. ಇವರಾಗ ಅನನ್ವೇಷಿತ ನವ ಖಂಡವೊಂದನ್ನು ಆಕಸ್ಮಿಕವಾಗಿ ಪ್ರವೇಶಿಸಿದ್ದರು.

	ನಿರ್ಮಲ ಕುಮಾರಿಯೊಂದಿಗೆ ಇವರ ಮದುವೆ (27-2-1923) ಬ್ರಾಹ್ಮೊಸಮಾಜದಲ್ಲಿಯ ವಿವಾಹವಿಧಿಗಳಲ್ಲಿ ಅತ್ಯಂತ ಅಗತ್ಯವಾಗಿದ್ದ ಹಲವಾರು ಸುಧಾರಣೆಗಳಿಗೆ ನಾಂದಿ ಹಾಕಿತ್ತು. ಇವರ ಈ ಎಲ್ಲ ಪ್ರಯತ್ನಗಳಲ್ಲಿ ರವೀಂದ್ರರ ಆಶೀರ್ವಾದ ಸದಾ ಇತ್ತು. ನವಯುಗದ ಮುಖವಾಣಿಯಾದ ಆ ಕವಿ ನವವಿಜ್ಞಾನದ ಮುಖವಾಣಿಯಾದ ಈ ವಿಜ್ಞಾನಿ ಜೊತೆ ಸಹಮತರಾಗಿದ್ದುದು ಉಭಯರಿಗೂ ಅನುಕೂಲವಾಯಿತು. 1921 ಡಿಸಂಬರ್ 22ರಂದು ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರರ ಸ್ಥಾಪಕ ಅಧ್ಯಕ್ಷತೆಯಲ್ಲಿ ವಿಶ್ವಭಾರತಿ ಸ್ಥಾಪನೆಯಾದಾಗ ಮಹಾಲನೊಬಿಸರು ಅದರ ಒಬ್ಬ ಗೌರವ ಕಾರ್ಯದರ್ಶಿಯಾಗಿ ನೇಮಕಗೊಂಡದ್ದು ಆ ಮಹಾಕವಿಗೆ ಇವರ ಮೇಲಿದ್ದ ಅತುಲ ವಿಶ್ವಾಸಕ್ಕೆ ನಿದರ್ಶನ. ವ್ಯವಸ್ಥಾಪನೆಯೊಂದರಲ್ಲೇ ಅಲ್ಲ ಬಂಗಾಲೀ ಸಾಹಿತ್ಯವನ್ನು, ಅದರಲ್ಲೂ ರವೀಂದ್ರ ವಾಙ್ಮಯವನ್ನು ಪ್ರಪಂಚಕ್ಕೆ ಪರಿಚಯಿಸುವ ಸ್ಮಜನಶೀಲ ಕಾರ್ಯದಲ್ಲಿ ಕೂಡ ಮಹಾಲನೊಬಿಸರು ಮುಂಚೂಣಿಯಲ್ಲಿದ್ದರು. ಆದರೆ ಇವರ ಪ್ರಥಮ ಪ್ರೇಮ ಸಂಖ್ಯಾಕಲನವಿಜ್ಞಾನ.

	ಭಾರತದಲ್ಲಿ ಸಂಖ್ಯಾಕಲನ ವಿಜ್ಞಾನದ ಬೀಜಬಿತ್ತಿ ಸಸಿಯನ್ನು ಬೆಳೆಸಿ ಪೋಷಿಸಿದವರು ಮಹಾಲನೊಬಿಸ್. ಈ ದಿಶೆಯಲ್ಲಿ ಅವರು ಇರಿಸಿದ ಮೊದಲ ಹೆಜ್ಜೆ ಎಂದರೆ ಕಲ್ಕತ್ತದಲ್ಲಿ 1931ರಲ್ಲಿ ಸ್ಥಾಪಿಸಿದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್. ಈ ಸಂಸ್ಥೆಯ ಪ್ರಸಾರವಾಣಿಯಾಗಿ ಸಾಂಖ್ಯ ಎಂಬ ಸಂಶೋಧನ ನಿಯತಕಾಲಿಕೆಯನ್ನು ಪ್ರಾರಂಭಿಸಿದರು. ಸಹಜವಾಗಿಯೇ ಈ ಸಂಸ್ಥೆ ನೂತನ ಅವಕಾಶಗಳಿಗಾಗಿ ಹಾತೊರೆಯುತ್ತದ್ದ ನವಪ್ರತಿಭೆಗಳ ನೆಲೆಯಾಯಿತು. ಇವರ ಸಂಶೋಧನ ಪ್ರಬಂಧಗಳಿಗೆ ಸಾಂಖ್ಯ. ಯೋಗ್ಯ ಪ್ರಕಟಣವೇದಿಕೆ ಒದಗಿಸಿ ಪ್ರಪಂಚದ ಮಹಾಪ್ರತಿಭೆಗಳ ಜೊತೆ ಇವರ ಸಹಯೋಗವನ್ನು ಸಾಧ್ಯವಾಗಿಸಿತು. ಈ ಎಲ್ಲ ಚಟುವಟಿಕೆಗಳ ಕೇಂದ್ರವಾಗಿ ಸಂಶೋಧನ, ಮಾರ್ಗದರ್ಶನ, ವ್ಯವಸ್ಥಾಪನೆ, ಆರ್ಥಿಕ ಸ್ಥಿತಿಗತಿಗಳ ವಿಚಾರ, ಭವಿಷ್ಯ ಚಿಂತನ ಇತ್ಯಾದಿ- ಮಹಾಲನೊಬಿಸರು ವಿಜೃಂಭಿಸಿದರು. ಸಂಸ್ಥೆ ಬೆಳೆಯಿತು, ಇವರೂ ಬೆಳೆದರು.

	ಇವರ ಸಾಧನೆಸಿದ್ಧಿಗಳನ್ನು ಪ್ರತ್ಯಕ್ಷವಾಗಿ ಕಂಡ ಪ್ರಪಂಚವಿಖ್ಯಾತ ಸಂಖ್ಯಾ ಕಲನವಿಜ್ಞಾನಿ ಸರ್ ರೊನಾಲ್ಡ್ ಫಿಶರ್ ಬರೆದಿರುವ ಮಾತು ಮಹಾಲನೊಬಿಸರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ: ಪ್ರಾರಂಭದ ಆ ದಿನಗಳಂದು ಮಹಾಲನೊಬಿಸ್ ಭೌತವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ಆದರೆ ಇವರು ಅಂಥಿಂಥ ಭೌತವಿಜ್ಞಾನ ಪ್ರಾಧ್ಯಾಪಕರಲ್ಲ. ತಮ್ಮ ಈ ಕರ್ತವ್ಯವನ್ನು ಮಾಡುತ್ತ ಪರಮಾಣು ಬಾಂಬಿನ ನಿರ್ಮಾಣದತ್ತ ಮನವನ್ನು ಒಯ್ಯುವ ವಿಜ್ಞಾನ ಮತ್ತು ತಂತ್ರವಿದ್ಯೆಯನ್ನು ಬೋಧಿಸುವುದರ ಬದಲು ತಮ್ಮ ಸಹಚರರಿಗೆ ಜ್ಞಾನ ಮಂದಿರದ ದ್ವಾರ ತೆರೆದು ಸಂಖ್ಯಾಕಲನವಿಜ್ಞಾನ ವಿಧಾನಗಳ ಮೂಲಕ ಅವರನ್ನು ಅದರೊಳಕ್ಕೆ ಒಯ್ದು ನೈಸರ್ಗಿಕ ಪ್ರಪಂಚದ ಬಗೆಗಿನ ನಿಜಜ್ಞಾನ ಒದಗಿಸುವುದು ಅಧಿಕ ಉಪಯುಕ್ತ ಎಂದು ಭಾವಿಸಿದ್ದರು. ಜನರ ವಿರುದ್ಧ ಸರ್ಕಾರ ಗೈಯುವ ಹೆಚ್ಚಿನ ಅಪರಾಧ ಮತ್ತು ಮೂರ್ಖತೆಗಳು ಜನರ ಅಜ್ಞಾನದ ಫಲ. ಆದ್ದರಿಂದ ಈ ಅಜ್ಞಾನದ ನಿವಾರಣೆಗೆ ಆದ್ಯಗಮನ ಹರಿಸುವುದು ಅಗತ್ಯ.-ಇದು ಮಹಾಲನೊಬಿಸರ ನಿಲವು.

	ಇವರ ಕಲ್ಪನೆಯ ಶಿಶುವಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್ ಕ್ರಮೇಣ ಬೃಹತ್ತಾಗಿ ಬೆಳೆದು ಅಖಿಲ ಭಾರತೀಯ ಸಂಸ್ಥೆಯಾಯಿತು. ಇದರ ಶಾಖೆಗಳು ದೇóಶದ ವಿವಿಧ ನಗರಗಳಲ್ಲಿ ಸ್ಥಾಪಿಸಲ್ಪಟ್ಟವು. ಮಹಾಲನೊಬಿಸರ ಸ್ವಂತ ಸಂಶೋಧನೆಗಳೂ ಈ ಸಂಸ್ಥೆಗಳ ಕೊಡುಗೆಗಳೂ ಭಾರತೀಯ ಸಂಖ್ಯಾಕಲನವಿಜ್ಞಾನದ ಪ್ರಬುದ್ಧತೆಗೆ ನಿದರ್ಶನಗಳು. ಭಾರತದ ಪಂಚವಾರ್ಷಿಕ ಯೋಜನೆಗಳನ್ನು ಸಂಖ್ಯಾಕಲನವಿಜ್ಞಾನದ ಚೌಕಟ್ಟಿನೊಳಗೆ ಅಳವಡಿಸಿ ನಿಲ್ಲಿಸಿದ್ದು ಮಹಾಲನೊಬಿಸರ ಪ್ರತಿಭೆಗೆ ಸಂದ ಗೌರವ.

	ಮಹಾಲನೊಬಿಸ್ ತಮ್ಮ ಜೀವನದ ಕೊನೆಯ ಉಸಿರಿನ ತನಕವೂ ಕರ್ತವ್ಯಶೀಲರಾಗಿದ್ದು 1972 ಜೂನ್ 28ರಂದು ಉದರಶಸ್ತ್ರ ಕ್ರಿಯಾನಂತರ ನಿಧನರಾದರು.  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ